ಕ್ಲಫ್, ಆರ್ಥರ್ ಹ್ಯೂ
 1819-1861. ಆಂಗ್ಲಕವಿ. ಹತ್ತಿ ವ್ಯಾಪಾರಿಯೊಬ್ಬನ ಮಗ. ಲಿವರ್‍ಪೂಲಿನಲ್ಲಿ ಹುಟ್ಟಿದ. ಬಾಲ್ಯವನ್ನು ಅಮೆರಿಕದಲ್ಲಿ ಕಳೆದನಾದರೂ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಬಂದು ರಗ್‍ಬಿ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ ವ್ಯಾಸಂಗ ಮಾಡಿದ. ಓರಿಯಲ್ ಕಾಲೇಜಿನಲ್ಲಿ ಫೆಲೋ ಆಗಿದ್ದು(1842) ನ್ಯೂಮನ್ನನ ಪ್ರಭಾವಕ್ಕೆ ಒಳಗಾದ. ತನ್ನ ಧರ್ಮಭೀರುತನದಿಂದಾಗಿ ಫೆಲೋ ಹುದ್ದೆಗೆ ರಾಜೀನಾಮೆ ನೀಡಿ(1848) ರೋಮ್, ಪ್ಯಾರಿಸ್ ನಗರಗಳಲ್ಲಿ ಸುತ್ತಿ ಬಂದು ಲಂಡನ್ನಿನ ಯೂನಿವರ್ಸಿಟಿ ಹಾಲಿನ ವಾರ್ಡನ್ ಆಗಿ ನೇಮಕಗೊಂಡ(1849-52). 1848ರಲ್ಲಿ ಷಡ್ಗಣಪಾದಗಳಿಂದ ಕೂಡಿದ ದಿ ಬೋತೀ ಆಫ್ ಟೋಬರ್-ನಾ-ವೊಲಿಚ್ ಎಂಬ ಪದ್ಯವನ್ನು ಪ್ರಕಟಿಸಿದ. 1849ರಲ್ಲಿ ಅಮೂರ್ಸ್ ಡ ವಾಯೇಜ್ ಎಂಬ ಷಡ್ಗಣಪಾದಗಳ ಕವನವನ್ನೂ 1850ರಲ್ಲಿ ಡಿಪ್‍ಸೈಚುಸ್ ಎಂಬ, ನಾಟಕೀಯ ಸಂಭಾಷಣೆಯಿಂದ ಕೂಡಿದ ಪದ್ಯವನ್ನೂ ಪ್ರಕಟಿಸಿದ. 1854ರಲ್ಲಿ ವಿದ್ಯಾ ಇಲಾಖೆಯ ಪರೀಕ್ಷಾಧಿಕಾರಿಯಾಗಿ ನೇಮಕಗೊಂಡ. ಸೈನಿಕ ಶಾಲೆಗಳ ಕಮಿಷನಿನ ಕಾರ್ಯದರ್ಶಿ ಹುದ್ದೆಯೇ ಈತನ ಕೊನೆಯ ಹುದ್ದೆಯಾಯಿತು. ಈ ಹುದ್ದೆಯಲ್ಲಿದ್ದಾಗ ಅನೇಕ ದೇಶಗಳನ್ನು ಸುತ್ತಿ ರೋಗಕ್ಕೆ ತುತ್ತಾಗಿ ಫ್ಲಾರೆನ್ಸಿನಲ್ಲಿ ಸತ್ತ. ಕ್ಲಫ್ ನಿಜಕ್ಕೂ ಸತ್ಯವನ್ನು ಅರಸುವ ಪ್ರಾಮಾಣಿಕ ಕವಿ ಎನಿಸಿದ್ದ. ಈತನ ಪದ್ಯಗಳು ಒಳ್ಳೆಯ ಆಲೋಚನೆಗಳಿಂದ ಕೂಡಿ ಸುಂದರವಾಗಿದ್ದರೂ ರಚನೆ ಮತ್ತು ವಿನ್ಯಾಸದಲ್ಲಿ ಸಪ್ಪೆಯಾಗಿದೆ. ಬೋತೀ ಕವನದಲ್ಲಿ ಅಳವಡಿಸಿಕೊಂಡ ಷಡ್ಗಣಪಾದಗಳ ಛಂದಸ್ಸು ಹಲವು ಕಡೆ ತೀರ ಒರಟೊರಟಾಗಿದೆ ಎನಿಸುತ್ತದೆ. ಈತನ ಕೆಲವು ಭಾವಗೀತೆಗಳನ್ನು ಬಿಟ್ಟರೆ ಉಳಿದವುಗಳು ಅಷ್ಟೇನೂ ಉತ್ತಮವಾದುವಲ್ಲವೆಂಬ ಮಾತಿದೆ. ಈತ ಮ್ಯಾಥ್ಯೂ ಆರ್ನಲ್ಡನ ಆಪ್ತಸ್ನೇಹಿತ. ಆರ್ನಲ್ಡ್ ಈತನನ್ನು ಕುರಿತು ಥಿರ್ಸಿಸ್ ಎಂಬ ಸುಂದರ ಶೋಕಗೀತೆಯೊಂದನ್ನು ರಚಿಸಿದ್ದಾನೆ. 		(ಎನ್.ಎಸ್.ಎಲ್.)